ವೇಣು -
	ಕೊಳಲು, ಅತ್ಯಂತ ಪ್ರಾಚೀನ ವಾದ್ಯಗಳಲ್ಲಿ ಒಂದು, ಸುಶಿರ(ಗಾಳಿ) ವಾದ್ಯಗಳಲ್ಲಿ ಪ್ರಮುಖವಾದುದು. ಪ್ರಪಂಚದ ಪುರಾತನ ಸಮುದಾಯಗಳಿಂದ ಹಿಡಿದು ಅತ್ಯಂತ ವಿಕಾಸಗೊಂಡಿರುವ ನಾಗರಿಕತೆಗಳ ವರೆಗೆ ಎಲ್ಲೆಡೆಯಲ್ಲೂ ಕಂಡುಬರುವ ವಾದ್ಯವಿದು. ಸರ್ವತ್ರ ಇದು ಏಕರೀತಿ ವಿಕಾಸಗೊಂಡಿರುವುದು ಮತ್ತು ಮಾನವೇತಿಹಾಸದುದ್ದಕ್ಕೂ ವಿಶೇಷ ಬದಲಾವಣೆಗೊಳ್ಳದೇ ಉಳಿದಿರುವುದು ಇದರ ಒಂದು ವೈಶಿಷ್ಟ್ಯ. ಕೆಲವು ವಿದ್ವಾಂಸರ ಪ್ರಕಾರ ಕೊಳಲನ್ನು ಉಪಜ್ಞಿಸಿದವರು ಆಂಧ್ರ ಮತ್ತು ಒರಿಸ್ಸದ ಗುಡ್ಡಗಾಡಿನ ಕಾಡುಗಳಲ್ಲಿ ವಾಸಿಸುವ ಸವಾರ ಎನ್ನುವ ಜನ. 

	ಪ್ರಾಚೀನ ಹಾಗೂ ತರುವಾಯದ ವೈದಿಕ ಗ್ರಂಥಗಳಲ್ಲಿ ಕೊಳಲನ್ನು ವೇಣು ಎಂದು ಕರೆದಿದ್ದಾರೆ. ವೈದಿಕ ಮಂತ್ರಗಳನ್ನು ಹಾಡುವಾಗ ವೀಣೆಯೊಂದಿಗೆ ವೇಣುವನ್ನೂ ಪಕ್ಕವಾದ್ಯವಾಗಿ ಉಪಯೋಗಿಸುತ್ತಿದ್ದರು. ಯಜ್ಞದಲ್ಲಿ ತುಣವ ಹಾಗೂ ಯಮನನ್ನು ಪ್ರಾರ್ಥಿಸಲು ನಾಡಿ ಎನ್ನುವ ಬಗೆಗಳ ವೇಣುವಿನ ಉಲ್ಲೇಖವಿದೆ. ಮಹಾಭಾರತದಲ್ಲಿ ವೇಣು ವೀಣಾ ಮೃದಂಗಾನಾಂ ಮನೋಜ್ಞಾನಾಂ ಚ ಸರ್ವಶಃ ಮತ್ತು ವೀಣಾಪ ಣವವೇಣೂನಾಂ ಸ್ವನಶ್ಚಾಪಿ ಮನೋಹರಮ್ ಎಂಬ ಹೇಳಿಕೆಗಳಿವೆ. ಅಜಂತ ಗುಹಾಚಿತ್ರಗಳಲ್ಲಿ ಕೊಳಲು ನುಡಿಸುತ್ತಿರುವ (2ನೆಯ ಶತಮಾನ) ಮಹಿಳೆಯರ ಶಿಲ್ಪವಿದೆ. ಇದಲ್ಲದೆ ಸಾಂಚಿ, ಗಾಂಧಾರ (ಆಫ್ಘಾನಿಸ್ತಾನ) ಅಮರಾವತಿಗಳಲ್ಲಿರುವ ಶಿಲ್ಪಗಳಲ್ಲಿಯೂ ಕೊಳಲು ಕಂಡುಬರುತ್ತದೆ. ಭರತನ ನಾಟ್ಯಶಾಸ್ತ್ರದಲ್ಲಿ ಇದರ ಬಗ್ಗೆ ವಿವರಣೆ ಇದೆ. ಕೊಳಲಿನಲ್ಲಿ ಸುಸ್ವರ ಮತ್ತು ಅಪಸ್ವರಗಳನ್ನು ಹಾಗೂ ಕೊಳಲು ವಾದಕರಲ್ಲಿ ಕಂಡುಬರುವ ಸದ್ಗುಣ ಮತ್ತು ದುರ್ಗುಣಗಳನ್ನು ಪಟ್ಟಿ ಮಾಡಲಾಗಿದೆ. ಹಾಗಾಗಿ ಆ ವೇಳೆಗಾಗಲೇ ಕೊಳಲು ಒಂದು ಮುಖ್ಯ ಹಾಗೂ ಪ್ರಮುಖ ವಾದ್ಯವಾಗಿ ರೂಪುಗೊಂಡಿತ್ತೆಂದು ಅರಿವಾಗುತ್ತದೆ. ಸಂಗೀತ ರತ್ನಾಕರದಲ್ಲಿ ಹಲವಾರು ಜನ ಗುಂಪಾಗಿ ನುಡಿಸುತ್ತಿದ್ದ ವಂಶೀ ವೃಂದದ ಬಗ್ಗೆ ಹೇಳಿಕೆಗಳಿವೆ. ಮಧ್ಯಕಾಲೀನ ಯುಗದ ವೈಷ್ಣವ ಸಂತರ ಕಾವ್ಯದಲ್ಲಿ ಕೃಷ್ಣನ ಕೊಳಲನ್ನು ಕುರಿತು ಅಸಂಖ್ಯಾತ ಉಲ್ಲೇಖಗಳಿವೆ. 

	ವೇಣುವನ್ನು ವಂಶಿ, ಬನ್ಸಿ, ಬಾಂಸುರಿ, ಮುರಳಿ ಎಂದೂ ತಮಿಳಿನಲ್ಲಿ ಕು¿ಲ್, ಕನ್ನಡದಲ್ಲಿ ಕೊಳಲು ತೆಲುಗಿನಲ್ಲಿ ಪಿಲ್ಲಂಗೋವಿ ಎಂದೂ ಕರೆಯುತ್ತಾರೆ. ಇವುಗಳಿಗೆ ಭಾಷಾ ಸಂಬಂಧ ಕೂಡ ಇರುವಂತೆ ತೋರುತ್ತದೆ. ವೇಣುವನ್ನು ಸಾಮಾನ್ಯವಾಗಿ ಬೊಂಬು ಅಥವಾ ಬಿದಿರಿನಿಂದ ತಯಾರಿಸುತ್ತಾರೆ. ಇದಲ್ಲದೆ ರಕ್ತಚಂದನ ಮರ, ದಂತ, ಕಂಚು, ಹಿತ್ತಾಳೆ, ಎಬೊನೈಟ್, ಖಾದಿರ ಮರ, ಬೆಳ್ಳಿ ಮತ್ತು ಬಂಗಾರಗಳಲ್ಲಿ ಕೊಳಲುಗಳನ್ನು ತಯಾರಿಸುತ್ತಾರೆ. ಆದರೆ ಅವು ಅಷ್ಟಾಗಿ ಚಾಲ್ತಿಯಲ್ಲಿಲ್ಲ. 

	ಕರ್ಣಾಟಕ ಸಂಗೀತದಲ್ಲಿ ಬಳಸುವ ಕೊಳಲಿನಲ್ಲಿ 9 ರಂಧ್ರಗಳಿವೆ. ಕೊಳಲಿನ ತಯಾರಿಕೆಗೆ ಬಳಸುವ ಬಿದಿರನ್ನು ಬಲು ಜಾಗರೂಕತೆಯಿಂದ ಆಯ್ಕೆಮಾಡಲಾಗುತ್ತದೆ. ಅನಂತರ ಅದನ್ನು ಒಂದು ವರ್ಷ ಕಾಲ ನೆರಳಿನಲ್ಲಿ ಒಣಗಿಸುತ್ತಾರೆ. ತರುವಾಯ ಅದರಲ್ಲಿ ರಂಧ್ರಗಳನ್ನು ಕೊರೆದು ವಾದನಯೋಗ್ಯ ಕೊಳಲನ್ನು ತಯಾರಿಸುವರು. 

	ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಕ್ಕಿಂತಲೂ ಮುಂಚಿತವಾಗಿ ಕರ್ಣಾಟಕ ಶಾಸ್ತ್ರೀಯ ಸಂಗೀತ ಪರಿಧಿಗೆ ಕೊಳಲನ್ನು ಸಮರ್ಥವಾಗಿ ಅಳವಡಿಸಲಾಯಿತು ಎನ್ನುವ ಅಭಿಪ್ರಾಯವಿದೆ. 1985ರ ಸುಮಾರಿಗೆ ಶರಭಶಾಸ್ತ್ರಿಗಳು ಕೊಳಲುವಾದನದ ತಂತ್ರಗಳನ್ನು ರೂಪಿಸಿ ಅವನ್ನು ಕಛೇರಿ ಮಾದರಿಗೆ ಅಳವಡಿಸಿದರು. ಹಿಂದುಸ್ತಾನಿಯಲ್ಲಿ ಬಳಸುವ ಕೊಳಲು ಹೆಚ್ಚು ನೀಳವಾಗಿರುತ್ತದೆ. ಕರ್ಣಾಟಕ ಸಂಗೀತದಲ್ಲಿಯದು ಅಷ್ಟೇನೂ ಉದ್ದವಿರುವುದಿಲ್ಲ. ಭಾರತದಲ್ಲಿ ನೇರವಾಗಿ ಹಿಡಿದು ನುಡಿಸುವ ಕೊಳಲಿಗಿಂತ ಅಡ್ಡವಾಗಿ ಹಿಡಿದು ನುಡಿಸುವ ಕೊಳಲೇ ಪ್ರಚಲಿತವಾಗಿದೆ. 

	ಕೊಳಲಿನಲ್ಲಿ ಉತ್ಪನ್ನವಾಗುವ ನಾದ ಅತ್ಯಂತ ಕರಾರುವಾಕ್ಕಾಗಿರು ತ್ತದೆನ್ನುವ ಕಾರಣಕ್ಕಾಗಿ ಅದನ್ನೇ ಆಧಾರವಾಗಿಟ್ಟುಕೊಂಡು ವೀಣೆ ಮುಂತಾದ ವಾದ್ಯಗಳನ್ನು ಶ್ರುತಿ ಮಾಡುತ್ತಿದ್ದರು ಎನ್ನುವ ಪ್ರತೀತಿ ಉಂಟು. ಹಿಂದೆ ಹಾಡುಗಾರಿಕೆಗೆ ಕೊಳಲನ್ನು ಪಕ್ಕವಾದ್ಯವಾಗಿ ಬಳಸುತ್ತಿದ್ದರಂತೆ. ಕರ್ಣಾಟಕ ವೇಣುವಾದನದಲ್ಲಿ ಗಾಯಕಶೈಲಿಯನ್ನು ತಂದು ಕ್ರಾಂತಿಯನ್ನೇ ಮಾಡಿದವರು ಟಿ. ಆರ್. ಮಹಾಲಿಂಗಂ (1926-86) ಎಂಬ ಪ್ರತಿಭಾನ್ವಿತ ಕಲಾವಿದ.			
				(ಎಸ್.ವಿ.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ